ಬೆಂಚಿಕಟ್ಟೆ ಗ್ರಾಮದಲ್ಲಿ ಪುಟ್ಟರಜ ಗವಾಯಿಗಳ ಪುಣ್ಯಸ್ಮರಣೆ ಸಮಾರಂಭ:

ಸಂಗೀತ, ಸಾಹಿತ್ಯದಿಂದ ನೆಮ್ಮದಿಯ ಜೀವನ : ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಜಗಳೂರು:ಸಮಾಜದಲ್ಲಿ ಯಾರಿಗೂ ಕೇಡು ಬಯಸದೆ, ವಂಚನೆ ಎಸಗದೆ ಸಹಜ ಮತ್ತು ಸರಳವಾದ ಬದುಕು ನಡೆಸಿದಲ್ಲಿ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೆಂಚಿಕಟ್ಟೆ ಗ್ರಾಮದಲ್ಲಿ ಭಾನುವಾರ ರಾತ್ರಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಸಿದ್ದರೂಢ ಭಜನಾ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 26ನೇ ವರ್ಷದ ಪೂಜಾ ಕಾರ್ಯಕ್ರಮ ಮತ್ತು ಪುಟ್ಟರಾಜ ಗವಾಯಿ ಗುರುಗಳ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಖ್ಯಾತ ಹಿಂದೂಸ್ತಾನಿ ಗಾಯಕರಾದ ಹುಮಾಯೂನ್ ಹರ್ಲಾಪುರ ಮತ್ತು ಶ್ರೀಪಾದ ದಾಸ್ ಅವರ ಸಂಗೀತ ಕಛೇರಿ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ವೇದ, ಪುರಾಣ ಹಗೂ ಪ್ರಾಚೀನ ಸಾಹಿತ್ಯ , ವಚನಗಳಲ್ಲಿ ಸಂಗೀತದ ಮಹತ್ವದ ಬಗ್ಗೆ ವಿಶೇಷ ಉಲ್ಲೇಖ ಇದೆ. ಮನುಷ್ಯನಿಗೆ ಸಂಗೀತ, ಸಾಹಿತ್ಯ , ಕಲೆಗಳು ಜೀವನೋತ್ಸಾಹ ಹೆಚ್ಚಿಸುತ್ತವೆ. ವೇದಪ್ರಿಯ, ನಾದಪ್ರಿಯ ಶಿವನಿಗೂ ಸಂಗೀತಕ್ಕೂ ಅವಿನಾಭಾವದ ನಂಟು ಇದೆ. ಇಂತಹ ಕುಗ್ರಾಮದಲ್ಲೂ ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ಉಳಿಸುವ ಕಾರ್ಯ ಜರುಗುತ್ತಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ಪ್ರತಿಭಾವಂತರಿಗೂ ಹುಚ್ಚು ಆವರಿಸುವುದು ಸಾಮಾನ್ಯ. ಹುಮಾಯೂನ್ ಹರ್ಲಾಪುರ್ ಅವರು ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ 4500ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿರುವುದು ಸಾಮಾನ್ಯ ಸಂಗತಿಯಲ್ಲ. ಕೂಲಿಕಾರ್ಮಿಕರೇ ವಾಸಿಸುವ ಈ ಪುಟ್ಟ ಗ್ರಾಮದಲ್ಲಿ ಪ್ರತಿ ವರ್ಷ ಶಾಸ್ತ್ರೀಯ ಸಂಗೀತದ ಕಛೇರಿ ಜರುಗುತ್ತದೆ ಎನ್ನುವುದೇ ಆಶ್ಚರ್ಯದ ಸಂಗತಿಯಾಗಿದೆ ಎಂದು ಶಾಸಕ ಬಿ ದೇವೇಂದ್ರಪ್ಪ ಹೇಳಿದರು.
ಶೋಷಿತ ಸಮುದಾಯಗಳ ಜನರು ದುಶ್ಚಟಗಳಿಗೆ ದಾಸರಾಗದೇ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಸಂಗೀತ ಆರೋಗ್ಯಕರ ಮನಸ್ಸುಗಳಿಗೆ ಪುಷ್ಟಿ ನೀಡುತ್ತದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರಮಿಕ ಸಮುದಾಯಗಳಿಗೂ ಸಂಗೀತಕ್ಕೂ ಆದಿ ಕಾಲದ ನಂಟಿದೆ. ನಿತ್ಯದ ಕಾಯಕದಲ್ಲಿ ಹಾಡು, ಹಸೆಯ ಮೂಲಕ ಸತ್ವಭರಿತ ಜಾನಪದ ಸಾಹಿತ್ಯ ರೂಪುಗೊಂಡಿದ್ದೇ ಗ್ರಾಮೀಣ ಪರಿಸರದಲ್ಲಿ ಎಂದು ಎಂದು ವಕೀಲ ಡಿ. ಶ್ರೀನಿವಾಸ್ ಹೇಳಿದರು.
ಇನ್ ಸೈಟ್ ಸಂಸ್ಥೆ ಮುಖ್ಯಸ್ಥ ಜಿ.ಬಿ. ವಿನಯ್ ಕುಮಾರ್, ಸಿಂಡಿಕೇಟ್ ಸದಸ್ಯ ದ್ಯಾಮಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್. ಅಂಜಿನಪ್ಪ, ಎನ್.ಎಸ್.ರಾಜು, ಬಿ, ಮಹೇಶ್ವರಪ್ಪ, ಕೃಷ್ಣಮೂರ್ತಿ ಕಿಲಾರಿ , ಆಯೋಜಕ ಬೆಂಚಿಕಟ್ಟೆ ಅಂಜಿನಪ್ಪ, ದ್ಯಾಮೇಶ್, ಗೋವಿಂದ ಇದ್ದರು.